ವಿವಾದಾತ್ಮಕ ಹೊಸ ಹಾಡು ‘ಟಟೀರಿ’ ಹಾಡಿನ 857 ಲಿಂಕ್ ಡಿಲೀಟ್ ಮಾಡಿಸಿದ ಹರಿಯಾಣ ಪೊಲೀಸರು
ಬಾಲಿವುಡ್‌ನ ಖ್ಯಾತ ಗಾಯಕ ಬಾದ್‌ಶಾ ಅವರ ಹೊಸ ಹಾಡು ‘ಟಟೀರಿ’ ಭಾರಿ ವಿವಾದಕ್ಕೆ ಗುರಿಯಾಗಿತ್ತು. ಮಹಿಳೆಯರು ಮತ್ತು ಅಪ್ರಾಪ್ತರ ಬಗ್ಗೆ ಆಕ್ಷೇಪಾರ್ಹ ಸಾಹಿತ್ಯವನ್ನು ಹೊಂದಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಹರಿಯಾಣ ಪೊಲೀಸರು ಈ ಹಾಡಿನ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಹರಿಯಾಣ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ‘ಟಟೀರಿ’ ಹಾಡಿನ ಒಟ್ಟು 857 ಲಿಂಕ್‌ಗಳನ್ನು ಈವರೆಗೆ ತೆಗೆದುಹಾಕಿದ್ದಾರೆ. ಇದರಲ್ಲಿ ಯೂಟ್ಯೂಬ್‌ನ 154 ವೀಡಿಯೊಗಳು ಮತ್ತು ಇನ್‌ಸ್ಟಾಗ್ರಾಮ್‌ನ 703 ರೀಲ್ಸ್ ಸೇರಿವೆ. ಮರು-ಅಪ್‌ಲೋಡ್ ಮಾಡಲಾದ ವೀಡಿಯೊಗಳು ಮತ್ತು ಶಾರ್ಟ್ಸ್ಗಳನ್ನು ಸಹ ಡಿಲೀಟ್ ಮಾಡುವಂತೆ ಸೋಶಿಯಲ್ ಮೀಡಿಯಾ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಮಹಿಳೆಯರ ಮತ್ತು ಅಪ್ರಾಪ್ತರ ಘನತೆಗೆ ಧಕ್ಕೆ ತರುವಂತಹ ಯಾವುದೇ ವಿಷಯವನ್ನು ಸಹಿಸುವುದಿಲ್ಲ ಎಂದು ಹರಿಯಾಣ ಪೊಲೀಸ್ ಮಹಾನಿರ್ದೇಶಕ ಅಜಯ್ ಸಿಂಘಾಲ್ ತಿಳಿಸಿದ್ದಾರೆ. ನಿಯಮ ಉಲ್ಲಂಘಿಸುವ ಖಾತೆಗಳನ್ನು ನಿರ್ಬಂಧಿಸಲಾಗುವುದು ಮತ್ತು ಪದೇ ಪದೇ ತಪ್ಪು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಅಲ್ಲದೇ, ಈ ಹಾಡನ್ನು ಬಳಸಿ ಹೊಸ ವೀಡಿಯೊಗಳನ್ನು ಕ್ರಿಯೇಟ್ ಮಾಡದಂತೆ ಅಥವಾ ಶೇರ್ ಮಾಡದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಹರಿಯಾಣದ ಪಂಚಕುಲ ನಗರದ ಸೆಕ್ಟರ್ 20 ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಹಾಡಿನ ವಿವಾದದಿಂದಾಗಿ ಬಾದ್‌ಶಾ ಅವರಿಗೆ ಅಪಖ್ಯಾತಿ ಬಂದಂತೆ ಆಗಿದೆ. ಕಳೆದ ವಾರವಷ್ಟೇ ರಾಷ್ಟ್ರೀಯ ಮಹಿಳಾ ಆಯೋಗವು ಈ ಹಾಡಿನ ಅಶ್ಲೀಲತೆಯ ಬಗ್ಗೆ ಗಾಯಕ ಬಾದ್‌ಶಾ ಮತ್ತು ಹಾಡಿನ ನಿರ್ಮಾಪಕರಿಗೆ ಸಮನ್ಸ್ ನೀಡಿತ್ತು. ಈ ಹಾಡು ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಸಂಕಷ್ಟಕ್ಕೆ ಸಿಲುಕಿದ ಬಾದ್‌ಶಾ ಈಗಾಗಲೇ ಈ ಬಗ್ಗೆ ಕ್ಷಮೆಯಾಚಿಸಿದ್ದು, ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ಹಾಡನ್ನು ಹಿಂಪಡೆದಿದ್ದಾರೆ.
ಇತರೆ ಸುದ್ದಿಗಳು