ಭಾರತಕ್ಕೂ ಕಾಲು ಇಟ್ಟಿದೀಯಾ ಝೋಂಬಿ ಡ್ರಗ್ ? ನಿಂತಲ್ಲೇ ತೂಗಾಡಿದ ಡೆಲಿವರಿ ಯುವಕ
ಪಂಜಾಬ್‌ನಲ್ಲಿ ಡೆಲಿವರಿ ಯುವಕನೋರ್ವ ಝೋಂಬಿಯಂತೆ ತೂಗಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು, ಅಮೆರಿಕಾದಲ್ಲಿ ಕಂಡುಬರುವ ಕ್ಸೈಲಾಜಿನ್ ಎಂಬ 'ಝೋಂಬಿ ಡ್ರಗ್' ಭಾರತಕ್ಕೂ ಕಾಲಿಟ್ಟಿದೆಯೇ ಎಂಬ ಆತಂಕವನ್ನು ಉಂಟುಮಾಡಿದೆ. ಪಂಜಾಬ್‌ನಲ್ಲಿ ಮಾದಕ ಜಾಲದ ದಂಧೆ ತೀವ್ರವಾಗಿದ್ದು, ನವತರುಣರು ಈ ಡ್ರಗ್ ಚಟಕ್ಕೆ ಬಿದ್ದು, ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ನಮ್ಮ ರಾಜ್ಯದಲ್ಲಿ ಮದ್ಯವರ್ಜನ ಶಿಬಿರಗಳಿರುವಂತೆ ಅಲ್ಲಿ ಡ್ರಗ್ ನಿರ್ಮೂಲನೆಗೆ ಶಿಬಿರಗಳಿವೆ. ಅಷ್ಟರ ಮಟ್ಟಿಗೆ ಅಲ್ಲಿನ ಯುವಕರು ತರುಣರು ಡ್ರಗ್‌ಗೆ ದಾಸರಾಗಿದ್ದಾರೆ. ಪಂಜಾಬ್‌ನ ಡ್ರಗ್ ಜಾಲಕ್ಕೆ ಹೇಗೆ ಅಲ್ಲಿನ ಯುವ ಸಮೂಹದ ಜನರು ಬಲಿಯಾಗ್ತಿದ್ದಾರೆ ಎಂಬುದನ್ನು ನೀವು 2016ರ ಉಡ್ತಾ ಪಂಜಾಬ್ ಸಿನಿಮಾದಲ್ಲಿ ನೋಡಬಹುದಾಗಿದೆ. ಪಂಜಾಬ್‌ನ ಸ್ಥಿತಿಯಲ್ಲಿ ಮಾತ್ರ ದೊಡ್ಡ ಬದಲಾವಣೆಯಾಗಲಿಲ್ಲ. ಹತ್ತಿರವೇ ಪಾಕಿಸ್ತಾನದ ಗಡಿಯೂ ಇರುವುದರಿಂದ ಇಲ್ಲಿಗೆ ಎಷ್ಟು ತಡೆಗಟ್ಟಲು ಪ್ರಯತ್ನಿಸಿದರು ಯಾವುದಾದರೊಂದು ಕಳ್ಳದಾರಿಯಲ್ಲಿ ಡ್ರಗ್ಸ್ ಬರುತ್ತಲೇ ಇರುತ್ತದೆ. ಹೀಗಿರುವಾಗ ಇಲ್ಲೊಂದು ಕಡೆ ಡ್ರಗ್ ಜಾಲಕ್ಕೆ ತುತ್ತಾಗಿ ಯುವಕನೋರ್ವ ಝೋಂಬಿಯಂತೆ ನಿಂತಲೇ ತೂಗಾಡುತ್ತಿರುವ ವೀಡಿಯೋವೊಂದು ಭಾರಿ ವೈರಲ್ ಆಗಿದ್ದು, ಅಲ್ಲಿನ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವುದನ್ನು ತೋರಿಸುತ್ತಿದೆ.ಹೌದು ಡೆಲಿವರಿ ಕೆಲಸ ಮಾಡುವ ಯುವಕನೋರ್ವ ಬೆನ್ನಿಗೆ ಬ್ಲಿಂಕಿಟ್ ಬ್ಯಾಗ್ ನೇತು ಹಾಕಿಕೊಂಡು ನಿಂತಲ್ಲೇ ತೂಗಾಡುತ್ತಿದ್ದಾನೆ. ಕೆಲ ವರದಿಗಳ ಪ್ರಕಾರ ಈತ ಸುಮಾರು 2 ಗಂಟೆಗಳ ಕಾಲ ಇದೇ ಸ್ಥಿತಿಯಲ್ಲಿದ್ದ ಎಂದು ವರದಿಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾತ್ರ ಇದ್ದ ಇಂತಹ ಝೋಂಬಿ ಡ್ರಗ್ ಭಾರತಕ್ಕೂ ಕಾಲಿಟ್ಟಿದೆಯಾ ಎಂಬ ಅನುಮಾನ ಹಲವರನ್ನು ಕಾಡಿದೆ.
ಇತರೆ ಸುದ್ದಿಗಳು